ಲಕ್ನೋ: ರೀಲ್ಸ್ ಚಿತ್ರೀಕರಣಕ್ಕಾಗಿ ಸುಮಾರು 30 ಅಡಿ ಎತ್ತರದಿಂದ ಡ್ಯಾಂಗೆ ಜಿಗಿದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಪಹುಜ್ ಡ್ಯಾಂನಲ್ಲಿ ನಡೆದಿದೆ. 38 ವರ್ಷದ ಪುಷ್ಪೇಂದ್ರ ಎಂಬಾತ ಸ್ನೇಹಿತರೊಂದಿಗೆ ಭಾನುವಾರ ಪಹುಜ್ ಡ್ಯಾಂಗೆ ತೆರಳಿದ್ದ. ರೀಲ್ಸ್ಗಾಗಿ ಸಾಹಸಮಯ ದೃಶ್ಯ ಸೆರೆಹಿಡಿಯುವ ಉದ್ದೇಶದಿಂದ ಡ್ಯಾಂನ ವೀಕ್ಷಣಾ ಸ್ಥಳದ ರೈಲಿಂಗ್ ದಾಟಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾನೆ. ನೀರಿನ ಆಳವನ್ನು ಸರಿಯಾಗಿ ಅಂದಾಜಿಸದೆ ಜಿಗಿದ ಪರಿಣಾಮ ನೀರಿಗೆ ಬೀಳುವ ಬದಲು ಕೆಳಗಿದ್ದ ಬಂಡೆಗಳ ಮೇಲೆ ಬಿದ್ದಿದ್ದಾನೆ. ಇದರಿಂದ ಎರಡೂ ಕಾಲುಗಳ ಮೂಳೆ ಮುರಿದಿದ್ದು, ಗಂಭೀರ ಗಾಯಗಳಾಗಿವೆ.ಗಾಯಗೊಂಡು ನೀರಿನಿಂದ ಹೊರಬರಲು ಸಾಧ್ಯವಾಗದೆ ಪರದಾಡುತ್ತಿದ್ದ ಪುಷ್ಪೇಂದ್ರನನ್ನು ಸ್ಥಳದಲ್ಲಿದ್ದವರು ಗಮನಿಸಿ ರಕ್ಷಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಎರಡೂ ಕಾಲುಗಳ ಮೂಳೆ ಮುರಿದಿರುವುದು ದೃಢಪಟ್ಟಿದೆ. ಒಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಮೆಟಲ್ ರಾಡ್ ಅಳವಡಿಸಲಾಗಿದ್ದು, ಮತ್ತೊಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ತಿಳಿದುಬಂದಿದೆ.ಈ ಘಟನೆಯನ್ನು ಪುಷ್ಪೇಂದ್ರನ ಸ್ನೇಹಿತರು ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೀಲ್ಸ್ಗಾಗಿ ಅಪಾಯಕಾರಿ ಸಾಹಸಕ್ಕೆ ಮುಂದಾಗಿ ವ್ಯಕ್ತಿ ಗಾಯಗೊಂಡಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
